ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಹೇಗೆ?


ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಹೇಗೆ?

*ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಎಲ್ಲಾ ಕ್ಷೇತ್ರದಲ್ಲೂ ಆರೋಗ್ಯಕರ ಸ್ಪರ್ಧೆ ನಡೆಸಬೇಕಾಗಿದೆ. ಪ್ರತಿ ವ್ಯಕ್ತಿಯೂ ತನ್ನಲ್ಲಿರುವ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಬೇಕಾಗುತ್ತದೆ.*

*ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಲ್ಲಿ ಆರಂಭದಲ್ಲಿ ಇದ್ದ ಆಸಕ್ತಿ, ಸ್ಪರ್ಧಾ ಮನೋಭಾವ ಇವೆಲ್ಲವೂ ಕಾಲಕ್ರಮೇಣ ಕಡಿಮೆಯಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಕಲಿಕಾ ವಾತಾವರಣ ಕೊರತೆ, ನಿತ್ಯಜೀವನದ ಅಡೆತಡೆಗಳು, ಸೂಕ್ತ ಮಾಹಿತಿ ಕೊರತೆ, ವಿಷಯ ಕ್ರೋಢೀಕರಣಕ್ಕೆ ಸಮಯದ ಅಭಾವ, ಸಿದ್ಧತೆಗೆ ಯೋಜನೆ ಇಲ್ಲದಿರುವಿಕೆ ಹಾಗೂ ಬಹುಮುಖ್ಯವಾಗಿ ಪ್ರಶ್ನೆಯ ವಿಧ ಹಾಗೂ ಅವುಗಳನ್ನು ಬಿಡಿಸುವ ವಿಧಾನ ತಿಳಿಯದೇ ಇರುವುದು.*

*ಇತ್ತೀಚಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂದರೆ, ಐಎಎಸ್, ಕೆಎಎಸ್, ಬ್ಯಾಂಕಿಂಗ್, ಶಿಕ್ಷಕರ ಆಯ್ಕೆ... ಹಾಗೂ ಇನ್ನಿತರ ಪರೀಕ್ಷೆಗಳಲ್ಲಿ ಪ್ರತಿ ಅಭ್ಯರ್ಥಿಯ ಮನೋಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಶ್ನೆಗಳು ಸಾಮಾನ್ಯ. ಕೆಲವು ಪರೀಕ್ಷೆಗಳಲ್ಲಂತೂ ಈ ರೀತಿಯ ಪ್ರಶ್ನೆಗಳು ಕಡ್ಡಾಯ. ಆದ್ದರಿಂದ ತನ್ನ ಶಾಲಾ ಮತ್ತು ಕಾಲೇಜುಗಳಲ್ಲಿ ಕಲಿತ ಪಠ್ಯ ವಿಷಯದ ಪ್ರಶ್ನೆಗಳನ್ನು ಅತ್ಯುತ್ಸಾಹದಿಂದ ಉತ್ತರಿಸಬಲ್ಲವರಾದರೂ, ಸಾಮಾನ್ಯ ಮಾನಸಿಕ ಸಾಮರ್ಥ್ಯ ಪರೀಕ್ಷಿಸುವ ಪ್ರಶ್ನೆಗಳನ್ನು ಬಿಡಿಸಲು ಪ್ರಯಾಸ ಪಡುವುದನ್ನು ಕಾಣಬಹುದಾಗಿದೆ.*

*ವ್ಯಕ್ತಿಯ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷೆ ಮಾಡುವ ಉದ್ದೇಶ, ಆತ ಮೇಲ್ಕಂಡ ಅಂಶಗಳನ್ನು ಹೇಗೆ ಅನ್ವಯಿಸಬಲ್ಲರು ಹಾಗೂ ತಮ್ಮಲ್ಲಿ ಅಡಗಿರುವ ಕೌಶಲಗಳನ್ನು ಹೇಗೆ ಬಳಸಿಕೊಳ್ಳಬಲ್ಲರು ಎಂಬುದಾಗಿದೆ. ಕಲಿತ ಜ್ಞಾನವನ್ನು ನಂತರದ ಹಂತಗಳಲ್ಲಿ ಬಳಸಿ ತನ್ನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಲ್ಲ ಚಾಕಚಕ್ಯತೆಯನ್ನೇ ಮಾನಸಿಕ*

*ಸಾಮರ್ಥ್ಯ ಎನ್ನುತ್ತೇವೆ.*
*==========*
*ಈ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಲು ಪಠ್ಯ ಪುಸ್ತಕದಲ್ಲಿ ನೀಡಿದ ಪ್ರಶ್ನೆಗಳು ಸಾಲದು. ಅದಕ್ಕಾಗಿ ಪ್ರತ್ಯೇಕವಾದ ಪ್ರಶ್ನೆಗಳನ್ನು ಸಿದ್ಧ ಪಡಿಸಬೇಕಾಗಿರುತ್ತದೆ. ಆ ಪ್ರಶ್ನೆಗಳು ಸಾಮಾನ್ಯವಾಗಿ ಶಾಬ್ದಿಕ (verbal) ಮತ್ತು ಅಶಾಬ್ದಿಕ  (non-verbal) ಮಾದರಿಯಾಗಿರುತ್ತವೆ. ಇವುಗಳೊಂದಿಗೆ, ಸಮಸ್ಯೆ ಬಿಡಿಸುವ ಸಾಮರ್ಥ್ಯ, ತೀರ್ಮಾನ ತೆಗೆದುಕೊಳ್ಳುವ ಕೌಶಲ ಹಾಗೂ ಒಂದು ನಿರ್ದಿಷ್ಟ ವಿಷಯದ ಬಗ್ಗೆ ವಿಮರ್ಶಾತ್ಮಕ ಹಾಗೂ ಕ್ರಿಯಾಶೀಲ ಯೋಚನೆಗಳನ್ನು ಪರೀಕ್ಷಿಸುವ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಯೂ ಸಹ ಒಂದು ನಿರ್ದಿಷ್ಟ ಸಾಮರ್ಥ್ಯ ಅಥವಾ ಕೌಶಲಗಳನ್ನು ಪರೀಕ್ಷಿಸುವುದಾಗಿದೆ. ಕೆಲವು ಪ್ರಶ್ನೆಗಳು ನೋಡಲು ಸರಳವಾಗಿ ಕಂಡರೂ, ಹಲವಾರು ಮೂಲ ಕಲ್ಪನೆಗಳ ಸಂಯೋಜನೆಯಿಂದ ಸಿದ್ಧಪಡಿಸಿದವುಗಳಾಗಿರುತ್ತದೆ-  (multiconceptproblems)*

*ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ಬಹಳ ಮುಖ್ಯವಾದ ಅಂಶವೆಂದೆರೆ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಹಾಗೂ ಛಲ ಬಿಡದೆ ಧನಾತ್ಮಕ ಮನೋಭಾವದಿಂದ ಗುರಿಯೆಡೆಗೆ ಸಾಗುವುದು. ಇದಕ್ಕಾಗಿ ಸೂಕ್ತ ಸಿದ್ಧತಾ ಯೋಜನೆಯನ್ನು ಸಿದ್ಧಪಡಿಸಿಟ್ಟುಕೊಂಡು ಅದರಂತೆ ಸಿದ್ಧತೆ ಮಾಡುತ್ತಾ ಗುರಿ ಸೇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಯಿಸಲು ನಿಖರತೆ, ತ್ವರಿತಗತಿ ಹಾಗೂ ಸಮಯ ನಿರ್ವಹಣೆ ಬಹಳ ಮುಖ್ಯ. ಹಾಗೂ ಇದರೊಂದಿಗೆ ಉತ್ತಮ ಅವಲೋಕನ ಗುಣ ಇದ್ದರಂತೂ ನಿಮ್ಮ ಶ್ರಮ ಸಾರ್ಥಕವಾಗುತ್ತದೆ.*

*ಅಭ್ಯರ್ಥಿಯು ನಿರ್ದಿಷ್ಟ ಪರೀಕ್ಷೆಗೆ ಸಿದ್ಧಪಡಿಸಿರುವ ಪಠ್ಯವಸ್ತು ಬಗ್ಗೆ ತಿಳಿದುಕೊಂಡಿರುವುದು ಅತ್ಯವಶ್ಯಕ. ಕೇವಲ ಆ ವಿಷಯದ ಅಭ್ಯಾಸ ಮಾಡುವುದರಿಂದ ಸಮಯ ಉಳಿಯುವುದಲ್ಲದೇ, ಅನವಶ್ಯಕ ಒತ್ತಡ ಉಂಟಾಗದು. ಪಠ್ಯವಸ್ತುವಿನೊಂದಿಗೆ, ಸಂಬಂಧಿಸಿದ ಪ್ರಾಧಿಕಾರ ಅಥವಾ ಇಲಾಖೆ ನೀಡುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ. ಇದರಿಂದ ಪ್ರಶ್ನೆಗಳ ವಿಧಗಳು, ಅಂಕಗಳ ವಿತರಣೆ ಮತ್ತಿತರ ಅಂಶಗಳು ತಿಳಿದು ಬರುತ್ತವೆ. ಮಾರುಕಟ್ಟೆಯಲ್ಲಿ ವಿವಿಧ ಲೇಖಕರು ಒದಗಿಸಿರುವ ಮಾದರಿ ಪತ್ರಿಕೆಗಳು ಸಿಗುತ್ತವೆ. ಉತ್ತರಿಸಲು ಪ್ರಯತ್ನಿಸಿ.*

*ವಿವಿಧ ಲಘು ವಿಧಾನಗಳನ್ನು ಗುರುತು ಹಾಕಿಕೊಳ್ಳಿ. ಅದೇ ಮಾದರಿಯ ಪ್ರಶ್ನೆಗಳು ಬಂದಾಗ ಉತ್ತರಿಸಲು ಸಹಕಾರಿಯಾಗಿರುತ್ತದೆ. ಸೂಕ್ತ ತರಬೇತಿಯ ಅವಶ್ಯಕತೆ ಇದೆ ಅನಿಸಿದಲ್ಲಿ, ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಳ್ಳಿ. ಪ್ರವೇಶ ಪಡೆದ ಮೇಲೆ ಗೈರು ಹಾಜರಾಗದೆ ಪ್ರತಿ ತರಗತಿಯಲ್ಲೂ ಸಂಪೂರ್ಣ ತೊಡಗಿಸಿಕೊಂಡು ವಿಷಯ ಸಂಗ್ರಹಿಸಿ. ಆಕರ ಗ್ರಂಥಗಳ ಮಾಹಿತಿಯನ್ನು ಬೋಧಕರಿಂದ ಪಡೆದುಕೊಳ್ಳಿ. ತರಗತಿ ನಡೆಯುವಾಗ ಸಂದೇಹಗಳನ್ನು ಪರಿಹರಿಸಿಕೊಳ್ಳಿ. ಅವು ಎಷ್ಟೇ ಚಿಕ್ಕದಾದರೂ ಪರವಾಗಿಲ್ಲ. ಕೇಂದ್ರಗಳಲ್ಲಿ ಬೋಧಕರೊಂದಿಗೆ ಚರ್ಚೆ ಮಾಡಿ ಅರ್ಥವಾಗದ ವಿಚಾರಗಳನ್ನು ಪರಿಹರಿಸಿಕೊಳ್ಳಿ. ಉಳಿದವರು ನಗುತ್ತಾರೆ ಎಂಬ ದಾಕ್ಷಿಣ್ಯ ಬೇಡ. ನಗುವವರೆಲ್ಲ ನಮ್ಮ ಸಹಾಯಕ್ಕೆ ಬರುವುದಿಲ್ಲ. ಜೊತೆಗಾರರೊಂದಿಗೆ ಮಾತು ಹಿತವಾಗಿರಲಿ. ಯಾವುದೇ ವಿಷಯದ ಬಗ್ಗೆ ವಾದ ಮಾಡಬೇಡಿ.*

*ಉತ್ತಮ ಅಂಕಗಳನ್ನು ಗಳಿಸುವುದು ಅತ್ಯಾವಶ್ಯಕ. ಆದರೆ ಕೇವಲ ಅಂಕ ಗಳಿಕೆಗಾಗಿ ಓದದೇ, ಜ್ಞಾನ ಸಂಪಾದನೆಗೆ ಓದಿದರೆ, ಅಂಕಗಳು ತಾನಾಗಿಯೇ ಬರುತ್ತವೆ. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆದ್ದರಿಂದ ಯಾವಾಗಲೂ  I CAN ಎಂದು ಹೇಳಿಕೊಳ್ಳುತ್ತೀರಿ. ಮನಸ್ಸನ್ನು ಪ್ರಶಾಂತವಾಗಿರಿಸಿಕೊಂಡು, ನಿಮ್ಮ ಸುತ್ತಮುತ್ತಲಿನ  ವಾತಾವರಣ ಆಹ್ಲಾದಕರವಾಗಿರುವಂತೆ ನೋಡಿಕೊಳ್ಳಿ.*

*ಉತ್ತಮ ಫಲಿತಾಂಶಕ್ಕಾಗಿ ನೀವು ಪಾಲಿಸಬಹುದಾದ ಕೆಲವು ಸರಳ ನಿಯಮಗಳು*

*ಯಾವ ವಿಷಯಗಳಿಗೆ ಎಷ್ಟು ಸಮಯ ನೀಡಬೇಕು ಎಂದು ನಿರ್ಧರಿಸಿಕೊಳ್ಳಿ.*

*ಕಠಿಣವೆನಿಸುವ ವಿಷಯಕ್ಕೆ ಸ್ವಲ್ಪ ಹೆಚ್ಚಿನ ಸಮಯ ನೀಡಿ.*

*recall-revise ವಿಧಾನ ಅನುಸರಿಸಿ.*

*ಅಭ್ಯಾಸ ಮಾಡಿರುವ ವಿಷಯ ನೆನಪಿಸಿಕೊಳ್ಳಿ; ಅಗತ್ಯ ಕಂಡು ಬಂದರೆ ಪುನರ್ ಓದಿ.*

*ಬೆಳಗಿನ ಜಾವದಲ್ಲಿ ಬೇಗ ಎದ್ದು ಓದಲು ಪ್ರಾರಂಭಿಸಿ. ಓದಲು ಮುಂಜಾನೆ ಪ್ರಶಸ್ತ ಸಮಯವಾಗಿದೆ.*

*ಓದಿನ ನಡುವೆ ನಿಮ್ಮ ಇತರೆ ಕೆಲಸಗಳಿಗೆ ಸಮಯ ಹೊಂದಿಸಿಕೊಳ್ಳಿ.*

*ಒತ್ತಡವನ್ನು ನಿವಾರಿಸಿಕೊಳ್ಳಲು ಧ್ಯಾನ ಮಾಡಿ. ಪ್ರಾರ್ಥನೆ ಮಾಡಿ.*

*ಅಭ್ಯಾಸದ ಸಂದರ್ಭದಲ್ಲಿ, ಚಿಕ್ಕ ನೋಟ್ ಪುಸ್ತಕದಲ್ಲಿ ನಿಮಗೆ ಸರಿ ಎನಿಸುವ ವಿಧಾನದಲ್ಲಿ ಲಘು ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳಿ.*

*ಟಿಪ್ಪಣಿಯನ್ನು ನೋಡಿದರೆ, ಪೂರ್ಣ ವಿಷಯ ನೆನಪಿಗೆ ಬರುವಂತಿರಲಿ.*

*ಅಭ್ಯಾಸದ ನಡುವೆ ಲಘು ವಿಶ್ರಾಂತಿ ಪಡೆಯಿರಿ. ಸಂಗೀತ ಕೇಳಿ, ಕಿಟಕಿ ಬಳಿ ಸುಮ್ಮನೆ ಹೂರಗೆ ಗಮನಿಸಿ.*

*ಯಾವಾಗಲೂ ಧನಾತ್ಮಕವಾಗಿಯೇ ಚಿಂತಿಸಿ. ಗುರಿಯೆಡೆಗೆ ಗಮನ ಕೇಂದ್ರಿಕೃತವಾಗುತ್ತದೆ.*

*ಹಗುರವಾಗಿ ಮಾತಾಡುವವರು, ಋಣಾತ್ಮಕವಾಗಿ ಪ್ರತಿಕ್ರಿಯೆ ನೀಡುವವರ ಮಾತನ್ನು ಪರಿಗಣಿಸಬೇಡಿ.*

*ಮನೆಯವರ ಸಹಕಾರ, ಪ್ರೊತ್ಸಾಹ ಪಡೆಯುತ್ತಿರಿ.*

*ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮುಗಿಸಿ.*

*ಹೊಟ್ಟೆ ಬಿರಿಯುವಂತೆ ತಿನ್ನುವುದು, ಕರಿದ ಪದಾರ್ಥಗಳನ್ನು ತಪ್ಪಿಸಿ.*

*ಕಾಫಿ, ಟೀ ಬಳಕೆ ಹಿತಮಿತವಾಗಿರಲಿ.*

*ಬೆಳಗ್ಗೆ ಅಥವಾ ಸಂಜೆ ಲಘುನಡಿಗೆ, ಯೋಗ ಅಥವಾ ದೈಹಿಕ ಕಸರತ್ತು ನಡೆಸಿ. ಆರೋಗ್ಯವೂ ಸಹ ಬಹಳ ಮುಖ್ಯ.*

*ಅತಿಯಾಗಿ ನಿದ್ದೆಗೆಟ್ಟು ಓದುವುದು ಬೇಡ. ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.*

ಮೂಲ:-   *==ಮಾಹಿತಿ ವೇದಿಕೆ==*

Post a Comment

0 Comments